ಅಬಲೋನ್
	ಹ್ಯಾಲಿಯೋಟಿಸ್ ಕ್ರಚಿರೊಡೀ ಎಂಬ ಮೃದ್ವಂಗಿಯನ್ನು ಅಮೆರಿಕದ ಪಶ್ಚಿಮತೀರದ ನಿವಾಸಿಗಳು ಈ ಹೆಸರಿಂದ ಕರೆಯುತ್ತಾರೆ. ಇದನ್ನು ಅವರು ಹಿಡಿದು ತಿನ್ನುತ್ತಾರೆ. ಹ್ಯಾಲಿಯೋಟಿಸ್ ಜಾತಿಯಲ್ಲಿ ನಾನಾ ಪ್ರಭೇದಗಳುಂಟು. ಹ್ಯಾಲಿಯೋಟಿಸ್ ಕ್ರಚಿರೊಡೀ ಪ್ರಭೇದಕ್ಕೆ ಸೇರಿದ ಜೀವಿಗಳು ಅತ್ಯಂತ ದೊಡ್ಡವು. ಇವು ಆಹಾರದೃಷ್ಟಿಯಿಂದಲೂ ವಾಣಿಜ್ಯ ದೃಷ್ಟಿಯಿಂದಲೂ ಮುಖ್ಯವೆನಿಸಿದೆ. ಇವುಗಳ ಚಿಪ್ಪು ಬಹಳ ಬೆಲೆ ಬಾಳುತ್ತದೆ. ಹ್ಯಾಲಿಯೋಟಿಸ್ ಟ್ಯೂಬರ್‍ಕ್ಯೂಲೇಟ್ ಎಂಬ ಪ್ರಭೇದ ಛಾನೆನ್ ದ್ವೀಪಗಳು ಭಾರತದ ಪೂರ್ವತೀರ ಮತ್ತು ಅಂಡಮಾನ ನಿಕೋಬಾರ್ ದ್ವೀಪಗಳ ತೀರಗಳಲ್ಲಿ ದೊರಕುತ್ತದೆ.

	ಹ್ಯಾಲಿತಯೋಟಿಸ್ ಮೃದ್ವಂಗಿಗಳಲ್ಲಿ ಗ್ಯಾಸ್ಟ್ರೊಪೋಡಾ ವರ್ಗದ ಪ್ರೊಸೋಬ್ರಾಂಕಿಯೆಟ ಗಣಕ್ಕೆ ಸೇರಿದೆ. ಪ್ರೊಸೋಬ್ರಾಂಕಿಯೇಟಾದಲ್ಲಿ ಡೈಯಾಟೋ ಕಾರ್ಡಿಯಾ ಮತ್ತು ಮಾನೆಟೋ ಕಾರ್ಡಿಯಾ ಎಂಬ ಎರಡು ವಿಭಾಗಗಳುಂಟು. ಹ್ಯಾಲಿಯೋಟಿಸ್ ಎಂಬುದು ಡೈಯಟೋ ಕಾರ್ಡಿಯಾ ವಿಭಾಗಕ್ಕೆ ಸೇರಿದೆ.

	ಈ ಪ್ರಾಣಿಯ ಮೇಲಿರುವ ಚಿಪ್ಪು ಚಪ್ಪಟೆಯಾಗಿದ್ದು ಮೇಲಿನ ರಂಧ್ರಗಳು ಒಂದರ ಹಿಂದೊಂದರಂತೆ ಸಾಲಾಗಿದೆ. ಇದು ಅತ್ಯಂತ ವೇಗವಾಗಿ ಚಲಿಸಬಲ್ಲ ಪ್ರಾಣಿ. ಮಿನಿಟಿಗೆ 5-6 ಗಜದವರೆಗೆ ಚಲಿಸುವುದೂ ಉಂಟು. ಯಾರಾದರೂ ಇದನ್ನು ಮುಟ್ಟಿದರೆ ನೆಲವನ್ನಾಗಲಿ ಇತರ ವಸ್ತುವನ್ನಾಗಲಿ ಪಾದದಿಂದ ಬಲವಾಗಿ ಹಿಡಿದು ಕೊಳ್ಳುತ್ತದೆ. ಸಮುದ್ರದ ಸಸ್ಯಗಳೇ ಇದಕ್ಕೆ ಆಹಾರ. ಉಸಿರಾಡಲು ಎರಡು ಕಿವಿರುಗಳಿವೆ. ಎಡಗಡೆಯದು ದೊಡ್ಡದು, ಬಲಗಡೆಯದು ಚಿಕ್ಕದು. ಮಲಮೂತ್ರ ಚಿಪ್ಪಿನ ಮೇಲಿರುವ ರಂಧ್ರಗಳ ಮೂಲಕ ಹೊರಬರುತ್ತವೆ. ಪ್ರಾಣಿ ಸತ್ತ ಅನಂತರ ಈ ಚಿಪ್ಪು ಉಳಿಯುತ್ತದೆ. ಈ ಚಿಪ್ಪು ಕಾಮನಬಿಲ್ಲಿನ ಬಣ್ಣಗಳಿಂದೊಡಗೂಡಿ ಮಿಂಚುತ್ತಿರುತ್ತದೆ. ಇದನ್ನು ಮುತ್ತಿನ ತಾಯಿ ಎನ್ನುತ್ತಾರೆ.
(ಎಲ್.ಎಚ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ